Search
Wednesday 3 June 2020
  • :
  • :

ಅರಿಷ್ಟಾಸುರ ವಧೆ

ವೃಂದಾವನದ ಜನರು ಚಕಿತಗೊಂಡರು, ಸ್ವಲ್ಪ ಭಯಭೀತರಾದರೂ ಕೂಡ. ಗುಡುಗಿನಂತಹ ಶಬ್ದ ಎಲ್ಲಿಂದ ಬರುತ್ತಿದೆ ಎಂದು ಅವರಿಗೆ ತಿಳಿಯಲಿಲ್ಲ. ಅದು ಜನನಿಬಿಡ ಮಾರುಕಟ್ಟೆ ಪ್ರದೇಶದಿಂದ ಬರುತ್ತಿತ್ತು. ಅವರಲ್ಲಿ ಬಹಳ ಮಂದಿ ಮಾರಾಟ ಮಾಡುತ್ತ ಖರೀದಿಸುತ್ತ ನಿರತರಾಗಿದ್ದರು. ಗಡ ಗಡ ಶಬ್ದ ಹತ್ತಿರ ಬರುತ್ತಿದ್ದ‌ಂತೆ ಅದು ಒಣ ಭೂಮಿ ಮೇಲೆ ಗೊರಸಿನ ಶಬ್ದದಂತೆ ಕೇಳಿ ಬಂದಿತು. ಜೋರಾದ ಸದ್ದು . .! ಅನಂತರ ಗುಟುರು ಶಬ್ದ ಗಾಳಿಯಲ್ಲಿ ತುಂಬಿ ಕೊಂಡಿತು, ಮತ್ತು ಭೂಮಿ ಕಂಪಿಸತೊಡಗಿತು! ಈ ಅನಿರೀಕ್ಷಿತ, ಅಪರಿಚಿತ ಅಪಾಯದಿಂದ ಪಾರಾಗಲು ಜನರು ಎಲ್ಲೆಂದರಲ್ಲಿ ಓಡತೊಡಗಿದರು. ತಮಗೆ ಅಥವಾ ತಮ್ಮ ಕುಟುಂಬಕ್ಕೆ ಅದು ಅಪಾಯ ಒಡ್ಡುವ ಮುನ್ನ ಮನೆ ಸೇರಲು ಅವರೆಲ್ಲ ಕಳವಳ, ತವಕದಿಂದ ಹೆಜ್ಜೆ  ಹಾಕಿದರು. ಆಗ, ದಿಢೀರನೆ, ಗುಡುಗಿನ, ಗುಟುರಿನ ಶಬ್ದ  ಸ್ತಬ್ಧವಾಗಿ ಹೋಯಿತು!

ಮಾರುಕಟ್ಟೆ  ಪ್ರದೇಶಕ್ಕೆ ಬಂದ ಕೃಷ್ಣ  ಬಲರಾಮರು ಜನರೆಲ್ಲ ಜೀವ ಭಯದಿಂದ ಓಡುತ್ತಿರುವುದನ್ನು ಕಂಡರು. ಮಾರುಕಟ್ಟೆಯ ಮುಖ್ಯ ಬೀದಿಗೆ ಬಂದಾಗ ಅವರಿಬ್ಬರೂ ದೊಡ್ಡ ಗೂಳಿಯನ್ನು ನೋಡಿದರು. ಗೂಳಿ ಅತ್ಯಂತ ಎತ್ತರ ಮತ್ತು ಶಕ್ತಿಶಾಲಿಯಂತೆ ಇತ್ತು. ಇಂತಹ ಅಗಾಧ ಸ್ವರೂಪಿ ಗೂಳಿಯನ್ನು ಅವರೆಂದೂ ನೋಡಿರಲಿಲ್ಲ. ಅದು ಉಸಿರಾಡುತ್ತಿದ್ದಾಗ ಅದರ ಮೂಗಿನಿಂದ ದಟ್ಟವಾಗಿ ಧೂಳು ಏಳುತ್ತಿತ್ತು. ದಾರಿಯಲ್ಲಿ ಸಿಕ್ಕ ಎಲ್ಲವನ್ನೂ ಧ್ವಂಸ ಮಾಡುತ್ತ – ಮರಗಳು, ಗುಡಿಸಲುಗಳು, ಗಾಡಿಗಳು, ಕೊನೆಗೆ ಸೇತುವೆಗಳೂ ಕೂಡ ಅದರ ಅಬ್ಬರದಿಂದ ನಾಶವಾಗುತ್ತಿದ್ದವು! ಆದರೆ ಅದು ಹಳದಿ ಉಡುಪಿನ ಶಾಮಲ ವರ್ಣದ ಬಾಲಕನನ್ನು ನೋಡಿದ ತತ್‌ಕ್ಷಣ ಅಲ್ಲೇ ನಿಂತುಕೊಂಡಿತು. ಅದು ಅರಿಷ್ಟಾಸುರ, ಗೂಳಿಯ ರೂಪದ ರಾಕ್ಷಸ. ಬಾಲಕನನ್ನು ನೋಡಿ ತಾನು ಹುಡುಕುತ್ತಿದ್ದುದ್ದು ಇವನನ್ನೇ ಎಂದು ಆ ರಾಕ್ಷಸನಿಗೆ ಅರ್ಥವಾಯಿತು.

ಇವನೇ ಕಂಸನ ಸೋದರಳಿಯ, ರಾಜನನ್ನು ಕೊಲ್ಲುವವನು. ಇವನನ್ನು ಕೊಲ್ಲಲೆಂದೇ ಕಂಸ ತನ್ನನ್ನು ಕಳುಹಿಸಿರುವುದು… ರಾಕ್ಷಸನ ಮನ ಓಡಿತು.

ಎಲ್ಲರೂ ಓಡುತ್ತಲೋ ಅಡಗಿಕೊಳ್ಳುತ್ತಲೋ ಇದ್ದಾಗ ಈ ಬಾಲಕ ಮಾತ್ರ ಧೈರ್ಯವಾಗಿ ಆ ಗೂಳಿಯತ್ತ ನೋಡುತ್ತ ನಿಂತು ಕೊಂಡ. ಅವನು ಗೂಳಿಗೆ ಹೇಳಿದ: `ಎಲ್ಲರನ್ನು ಯಾಕೆ ಭಯ ಪಡಿಸುತ್ತಿರುವೇ? ನನ್ನೊಡನೆ ಹೋರಾಡಬೇಕೆಂದಿದ್ದರೆ ನಾನು ನಿನ್ನ ಆಸೆ ಪೂರೈಸುವೆ.’ ಆಗ ಅರಿಷ್ಟಾಸುರನಿಗೆ ಅರ್ಥವಾಗಿ ಹೋಯಿತು – ಈ ಬಾಲಕನೇ ಅನೇಕ ರಾಕ್ಷಸರನ್ನು ಕೊಂದದ್ದು ಎಂದು. ಈ ಬಾಲಕನ ಯಶೋಗಾಥೆ ರಾಜ್ಯದಲ್ಲಿ ಈಗಾಗಲೇ ಮನೆಮಾತಾಗಿತ್ತು. ಇಷ್ಟು ಧೈರ್ಯವಾಗಿ ಇನ್ನಾವ ಬಾಲಕನೂ ಮಾತ‌ನಾಡುವುದು ಸಾಧ್ಯವಿಲ್ಲ.

ಅರಿಷ್ಟಾಸುರನ ಕಣ್ಣುಗಳು ಕೆಂಪಾದವು. ಗುಟುರು ಹಾಕಿದಾಗ ಧೂಳು ಅವ್ಯಾಹತವಾಗಿ ಬರತೊಡಗಿತು. ಕೃಷ್ಣನ ಮೇಲೆ ಎರಗಲು ಮುಂದಾದ, ಈ ರಾಕ್ಷಸ. ತನ್ನ ತಲೆ ಕೆಳಗೆ ಮಾಡಿ ಕೃಷ್ಣನತ್ತ ದಾಂಗುಡಿ ಇಟ್ಟನು. ಕೃಷ್ಣ ಇದಕ್ಕಾಗಿ ಕಾದಿದ್ದ. ಸಮೀಪ ಬರುತ್ತಿದ್ದ ಅದರ ಕೊಂಬುಗಳನ್ನು ಗಟ್ಟಿಯಾಗಿ ಹಿಡಿದುಕೊಂಡ. ಅದರ ತಲೆಯನ್ನು ತಳ್ಳುತ್ತ ಅದನ್ನು ಹಿಂದಕ್ಕೆ ನೂಕಿದ. ಅರಿಷ್ಟಾಸುರನಿಗೆ ಒಂದು ಕ್ಷಣ ಕಣ್ಣು ಮಂಜಾಯಿತು. ಅವನು ಕಕ್ಕಾಬಿಕ್ಕಿಯಾದ. ತನ್ನ ಕೊಂಬಿರುವ ಕಡೆಯಿಂದ ನೆತ್ತರು ಸುರಿಯುತ್ತಿರುವಂತೆ ಭಾಸವಾಯಿತು. ತಾಳಲಾರದಂತಹ ನೋವು. ಕೊಂಬು ಮುರಿದಿದೆ ಎಂದು ಆಗ ಅರಿವಾಯಿತು! ಹೇಗೋ ಸಾವರಿಸಿಕೊಂಡು ಮತ್ತೊಂದು ಕಾಳಗಕ್ಕೆ ಸಿದ್ಧನಾದ. ಈ ಬಾರಿ ಆಕ್ರೋಶ ಎರಡು ಪಟ್ಟು!

ಗೂಳಿಯ ರೂಪದ ರಾಕ್ಷಸ ಮತ್ತೆ ಕೃಷ್ಣನ ಮೇಲೆರಗಲು ಮುಂದಾದ. ಈ ಬಾರಿ ಕೃಷ್ಣ  ಪಕ್ಕಕ್ಕೆ ಸರಿದು ರಾಕ್ಷಸನ ದಾರಿಯಿಂದ ಆಚೆಗೆ ಬಂದ. ಗೂಳಿ ಮುನ್ನುಗ್ಗಿದಾಗ ಕೃಷ್ಣ ಅದರತ್ತ ಧುಮುಕಿ ಜೋರಾಗಿ ಒದ್ದ,  ಒದ್ದೆ ಬಟ್ಟೆಯನ್ನು ನೆಲಕ್ಕೆ ಹಾಕಿ ಹಿಂಡುವಂತೆ, ಕೃಷ್ಣನ ಹೊಡೆತದಿಂದ ರಾಕ್ಷಸ ಹೈರಾಣಾದ. ಅವನು ಕೈಚೆಲ್ಲಿದ. ಪ್ರಾಣ ತೆತ್ತ. ಗ್ರಾಮದ ಜನರ ಸಂತೋಷಕ್ಕೆ ಪಾರವೇ ಇಲ್ಲ. ಅವರ ಪುಟ್ಟ ನಾಯಕ ಮತ್ತೆ ಅವರನ್ನು ರಕ್ಷಿಸಿದ್ದ!
Leave a Reply

Your email address will not be published. Required fields are marked *