Search
Wednesday 15 July 2020
  • :
  • :

ಅಪ್ರಮೇಯ ಸ್ವಾಮಿ ದೇವಸ್ಥಾನ

ಮೈಸೂರು – ಬೆಂಗಳೂರು ಹೆದ್ದಾರಿಯಲ್ಲಿ, ಬೆಂಗಳೂರಿನಿಂದ ಸುಮಾರು ೬೦ ಕಿ.ಮೀ. ದೂರದಲ್ಲಿ (ಚನ್ನಪಟ್ಟಣದಿಂದ ೧ ಮೈಲಿ) ಪ್ರಖ್ಯಾತವಾದ ದೇವಸ್ಥಾನದ ಗಗನಚುಂಬಿ ಗೋಪುರವೊಂದು ನಿಮ್ಮನ್ನು ಕೈಬೀಸಿ ಕರೆಯುತ್ತಿರುವಂತೆ ತೋರುತ್ತದೆ. ಹೆದ್ದಾರಿಯ ರಸ್ತೆ ಫಲಕವು ಆ ಸ್ಥಳವನ್ನು ಮಳೂರು ಎಂದು ಸಾರಿ ಹೇಳುತ್ತದೆ. ಕುತೂಹಲಕರ ಪ್ರವಾಸಿಯು ಈ ದಾರಿಯನ್ನು ಹಿಡಿದು ಸಾಗಿದರೆ ಅಪ್ರಮೇಯ ಸ್ವಾಮಿ, ಅವನ ಪತ್ನಿ ಅರವಿಂದವಲ್ಲಿ ಮತ್ತು ಜಗದ್ವಿಖ್ಯಾತವಾದ ಅಂಬೆಗಾಲು ಕೃಷ್ಣನ ಭವ್ಯ ದೇಗುಲವನ್ನು ತಲಪುತ್ತಾನೆ.

ಇದೊಂದು ದಿವ್ಯ ಕ್ಷೇತ್ರ. ಪುಣ್ಯಭೂಮಿ. ಹಚ್ಚಹಸುರಾದ ಸಸ್ಯರಾಶಿ, ಪುಣ್ಯತೀರ್ಥಗಳು, ಮನೋಹರವಾದ ದೇವಸ್ಥಾನ ಸಮುಚ್ಚಯ ಮತ್ತು ಅದರ ಆಹ್ಲಾದಕರವಾದ ಆವರಣವು ಭಕ್ತಿಭಾವಕ್ಕೆ ಪುಷ್ಟಿಯನ್ನು ನೀಡುವಂತಹ ವಾತಾವರಣವನ್ನು ಸೃಷ್ಟಿಸಿವೆ.

ಇತಿಹಾಸ

‘ಮಳೂರು’ ಎಂಬ ಹೆಸರಿನ ಹಿಂದೆ ಒಂದು ಕುತೂಹಲಕರ ಕಥೆಯಿದೆ. ಹಿಂದೆ ಸಾರಂಗಧರ ಎಂಬ ಒಬ್ಬ ರಾಜನಿದ್ದ. ಅವನ ಶತ್ರುಗಳು ಅವನ ಕೈಕಾಲುಗಳನ್ನು ಕತ್ತರಿಸಿ ನಿರ್ಮಲ ಎಂಬ ನದಿಯಲ್ಲಿ ಎಸೆದುಬಿಟ್ಟರು. ಆ ನದಿಯು ಈ ಸ್ಥಳಕ್ಕೆ ಸಮೀಪದಲ್ಲಿ ಹರಿಯುತ್ತಿತ್ತು. ಸಹಿಸಲಸಾಧ್ಯವಾದ ನೋವಿನಿಂದ ನರಳುತ್ತಿದ್ದರೂ ಸಾರಂಗಧರನು ಎಡೆಬಿಡದೆ ಭಗವನ್ನಾಮ ಸಂಕೀರ್ತನೆಯನ್ನು ಮಾಡುತ್ತಾ ಹೇಗೋ ಈ ದೇವಸ್ಥಾನವನ್ನು ತಲಪುತ್ತಾನೆ. ಪ್ರಭುವಿನ ಎಣೆಯಿಲ್ಲದ ಅನುಗ್ರಹದಿಂದ ರಾಜನ ಕೈಕಾಲುಗಳು ಮೊದಲಿನ ರೂಪಕ್ಕೆ ಮತ್ತೆ ಬೆಳೆಯುತ್ತವೆ. ‘ಬೆಳೆಯುವುದು’ ಎನ್ನುವುದಕ್ಕೆ ತಮಿಳಿನಲ್ಲಿ ‘ಮುಳೈಥತ್ತು’ ಎಂದು ಹೇಳುತ್ತಾರೆ. ಸಾರಂಗಧರನ ಕೈಕಾಲುಗಳು ಮರಳಿ ಬೆಳೆದುದರಿಂದ ಈ ಕ್ಷೇತ್ರಕ್ಕೆ ‘ಮುಳೈತ್ತೂರು’ ಎಂಬ ಹೆಸರು ಬಂತು. ಕಾಲಾನಂತರದಲ್ಲಿ   ‘ಮುಳೈತ್ತೂರು’ ಇಂದಿನ ‘ಮಳೂರು’ ಆಯಿತು. ಪ್ರಾಚೀನ ಧರ್ಮಗ್ರಂಥಗಳಲ್ಲಿ ಈ ಸ್ಥಳವನ್ನು ದಕ್ಷಿಣ ಅಯೋಧ್ಯಾ, ಚತುರ್ವೇದ ಮಂಗಳಪುರ, ಜ್ಞಾನಮಂಟಪ ಕ್ಷೇತ್ರ, ರಾಜೇಂದ್ರಸಿಂಹಗರಿ ಮುಂತಾಗಿ ಹೆಸರಿಸಲಾಗಿದೆ.

ಶ್ರೀ ಅಪ್ರಮೇಯ ಸ್ವಾಮಿ ದೇವಸ್ಥಾನವು ಬಹಳ ಪ್ರಾಚೀನವಾದ ಕಟ್ಟಡ. ಐತಿಹ್ಯದ ಪ್ರಕಾರ ‘ದಕ್ಷಿಣ ಅಯೋಧ್ಯೆ’ ಎಂದು ಪ್ರಸಿದ್ಧವಾದ ಈ ಸ್ಥಳದಲ್ಲಿ ಶ್ರೀರಾಮಚಂದ್ರನು ಅನೇಕ ವರ್ಷಗಳ ಕಾಲ ತಂಗಿದ್ದು ಅಪ್ರಮೇಯ ಸ್ವಾಮಿಯನ್ನು ಆರಾಸಿದ್ದ. ಆದ್ದರಿಂದ ಅಪ್ರಮೇಯನು ‘ಶ್ರೀರಾಮಾಪ್ರಮೇಯ’ ಎಂದೂ ಪ್ರಸಿದ್ಧ. ಶ್ರೀರಾಮಚಂದ್ರನು ಈ ಸ್ಥಳದಲ್ಲಿ ಹೋಮಗಳು ಮತ್ತು ಇತರ ಧಾರ್ಮಿಕ ವಿಗಳನ್ನು ಆಚರಿಸಿದ್ದ. ಅವನು ಯಜ್ಞಗಳನ್ನು ಮಾಡಿದ್ದ ಸಂರಚನೆಗಳ ಅವಶೇಷಗಳು ಇಂದಿಗೂ ಇಲ್ಲಿ ಕಂಡುಬರುತ್ತವೆ. ಬ್ರಹ್ಮಾಂಡ ಪುರಾಣದ ಕ್ಷೇತ್ರ ಮಹಾತ್ಮೆ ಸ್ಕಂಧದಲ್ಲಿ ಅಪ್ರಮೇಯ ಸ್ವಾಮಿಯನ್ನು ಕುರಿತು ಹನ್ನೆರಡು ಅಧ್ಯಾಯಗಳಷ್ಟು ವರ್ಣನೆಯಿದೆ.

ದೇವಾಲಯದ ವಾಸ್ತುಶಿಲ್ಪ

ದೇವಸ್ಥಾನದ ಸುಂದರ ರಾಜಗೋಪುರವು ಮುಗಿಲು ಮುಟ್ಟುವಂತೆ ಭವ್ಯವಾಗಿ ನಿಂತಿದೆ. ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಾಣವಾಗಿರುವ ಈ ರಾಜಗೋಪುರದ ಪಾರ್ಶ್ವಗಳಲ್ಲಿ ದಶಾವತಾರದ ಮನೋಜ್ಞ ಶಿಲ್ಪಗಳು ಗೋಡೆಗಳನ್ನು ಅಲಂಕರಿಸಿವೆ. ಮಹಾದ್ವಾರವು ೩೦ ಅಡಿ ಎತ್ತರವಾಗಿದೆ. ಮಹಾದ್ವಾರದ ಎದುರು ೩೦ ಅಡಿ ಎತ್ತರದ ಅಖಂಡ ಶಿಲೆಯ ದೀಪಸ್ತಂಭವಿದ್ದು ಎತ್ತರದಲ್ಲಿ ಅದು ಮಹಾದ್ವಾರದೊಡನೆ ರ್ಸ್ಪಸುತ್ತಿದೆ. ರಾಜಗೋಪುರಕ್ಕೆ ಅಭಿಮುಖವಾಗಿ ಪುರಂದರದಾಸ ಮಂಟಪವಿದೆ. ಇದು ನವನೀತ ಕೃಷ್ಣನನ್ನು ನೋಡಿ ಆನಂದಪರವಶರಾದ

ಪುರಂದರದಾಸರ ಭಾವೋದ್ರೇಕವನ್ನು ತಲತಲಾಂತರಗಳ ಕಾಲ ಅಜರಾಮರಗೊಳಿಸಿದೆ. “ಜಗದೋದ್ಧಾರನ ಆಡಿಸಿದಳು ಯಶೋದ” ಎಂಬ ಪ್ರಖ್ಯಾತ ಕೀರ್ತನೆಯನ್ನು ರಚಿಸಿದ ದಾಸವರೇಣ್ಯರಿಗೆ ಸಾರ್ಥಕವಾದ ಸ್ಮಾರಕವಾಗಿದೆ.

ಅರವಿಂದವಲ್ಲಿ ಅಮ್ಮನವರು

ದೇವಸ್ಥಾನದ ವಾಯವ್ಯ ಮೂಲೆಯಲ್ಲಿರುವ ವಿಷ್ಣು ತೀರ್ಥದ ಕಮಲ ಪುಷ್ಪದಲ್ಲಿ ಜನಿಸಿದ ಕಾರಣದಿಂದ ಮಹಾಲಕ್ಷ್ಮೀದೇವಿಯನ್ನು ಅರವಿಂದವಲ್ಲಿ ಎಂದು ಕರೆಯುತ್ತಾರೆ. ದೇವಿಯು ಒಂದು ಕಮಲದಲ್ಲಿ ಪದ್ಮಾಸನ ಭಂಗಿಯಲ್ಲಿ ಕುಳಿತು, ಚತುರ್ಭುಜ ರೂಪದಲ್ಲಿ ದರ್ಶನ ಕೊಡುತ್ತಿದ್ದಾಳೆ. ಮೇಲಿನ ಎರಡು ಕೈಗಳಲ್ಲಿ ಕಮಲ ಪುಷ್ಪಗಳನ್ನು ಹಿಡಿದುಕೊಂಡಿದ್ದಾಳೆ, ಉಳಿದ ಎರಡು ಕೈಗಳು ವರದ ಮತ್ತು ಅಭಯ ಮುದ್ರೆಗಳಲ್ಲಿದ್ದು  ಭಕ್ತರಿಗೆ ಅನುಗ್ರಹಿಸುತ್ತಿದ್ದಾಳೆ. ಅದೇ ಗರ್ಭಗುಡಿಯಲ್ಲಿ  ಶ್ರೀ ಆಂಡಾಳ್ ಮತ್ತು ಶ್ರೀ ದೇಶಿಕನ್ ಅವರ ಅರ್ಚಾ ವಿಗ್ರಹಗಳಿವೆ.

 ಅಪ್ರಮೇಯ ಸ್ವಾಮಿ

ಶ್ರೀ ಅಪ್ರಮೇಯ ಸ್ವಾಮಿಯ ಭವ್ಯವಾದ ಮೂಲ ಮೂರ್ತಿಯು ಸಾಲಿಗ್ರಾಮ ಶಿಲೆಯಿಂದ ನಿರ್ಮಿತಗೊಂಡಿದೆ. ‘ಪ್ರಮೇಯ’ ಎಂದರೆ ಅಳೆಯಬಹುದಾದ ಗಾತ್ರ. ‘ಅಪ್ರಮೇಯ’ ಎಂದರೆ ಅಳೆಯಲಾಗದ್ದು. ಅವನ ಕರುಣೆಯು ಅಳೆಯಲಾಗದ್ದು, ಆದ್ದರಿಂದ ಸ್ವಾಮಿಯು ‘ಅಪ್ರಮೇಯ’ ಎಂದು ಪ್ರಸಿದ್ಧನಾಗಿದ್ದಾನೆ. ಚತುರ್ಭುಜಾಕಾರನಾದ ಸ್ವಾಮಿಯು ಮೇಲಿನ ಎರಡು ಕೈಗಳಲ್ಲಿ ಶಂಖ ಮತ್ತು ಚಕ್ರವನ್ನು ಹಿಡಿದಿದ್ದಾನೆ. ಕೆಳಗಿನ ಎರಡು ಕೈಗಳಲ್ಲಿ ಗದಾ ಮತ್ತು ಪದ್ಮಗಳನ್ನು ಹಿಡಿದಿದ್ದಾನೆ. ಪದ್ಮವು ಅಭಯ ಮುದ್ರೆಯ ಹಸ್ತದಲ್ಲಿದೆ. ಶುಕನಾಸಿ ಮಂಟಪದಲ್ಲಿ ಅಪ್ರಮೇಯ ಸ್ವಾಮಿಯ ಉತ್ಸವಮೂರ್ತಿಯು ಗಂಧದ ಮಂಟಪದಲ್ಲಿದೆ. ಈ ಉತ್ಸವ ಕೈಂಕರ್ಯವನ್ನು ನೆರವೇರಿಸುತ್ತಿದ್ದಾರೇನೋ ಎನಿಸುತ್ತದೆ.

ಅಂಬೆಗಾಲು ಕೃಷ್ಣ

ದೇವಸ್ಥಾನದ ವಾಯವ್ಯ ಪಾಗಾರದಲ್ಲಿ ಸಾಗಿದರೆ ಪ್ರಖ್ಯಾತ (ನವನೀತ) ಅಂಬೆಗಾಲು ಕೃಷ್ಣನ ಸನ್ನಿಯು ಎದುರಾಗುತ್ತದೆ. ಈ ಕೃಷ್ಣನ ಆಕೃತಿಯು ಅನೇಕ ಪುರಾಣಗಳಲ್ಲಿ ಪ್ರಸ್ತಾವವಾಗಿದೆ. ವ್ಯಾಸ ಮಹರ್ಷಿಗಳು ಈ ವಿಗ್ರಹವನ್ನು ಪ್ರತಿಷ್ಠಾಪಿಸಿದರೆಂದು ಹೇಳಲಾಗಿದೆ. ಅವನಿಗೆ ಪ್ರೀತಿಪಾತ್ರವಾದ ಬೆಣ್ಣೆಯ ಮುದ್ದೆಯನ್ನು ಬಲಗೈಯಲ್ಲಿ ಹಿಡಿದುಕೊಂಡಿದ್ದಾನೆ. ನಿಮ್ಮಲ್ಲಿ ಮಾತೃಪ್ರೇಮವನ್ನು ಆಹ್ವಾನಿಸುವ ರೀತಿಯಲ್ಲಿ ಶ್ರೀಕೃಷ್ಣನು ನಿಮ್ಮೆಡೆಗೆ ಅಂಬೆಗಾಲು ಇಡುತ್ತಾ ಬರುತ್ತಿರುವ ಹಾಗೆ ತೋರುತ್ತದೆ. ಅಪ್ರಯತ್ನಿತವಾಗಿ ಪ್ರೀತಿಯಧಾರೆಯನ್ನು ಅವನ ಮೇಲೆ ಕರೆಯುವಂತೆ ಆಗ್ರಹಪಡಿಸುತ್ತಿದ್ದಾನೇನೋ ಎನ್ನುವಂತಿದೆ. ಅವನ ಮುಖವು ಪೂರ್ಣಚಂದ್ರ ಬಿಂಬದಂತಿದೆ. ಹರಿಣದಂತಹ ಅವನ ಕಣ್ಣುಗಳು ಬಹಳ ಆಕರ್ಷಕವಾಗಿವೆ. ಗುಂಗುರು ಕೂದಲು ಚಿತ್ತಾಕರ್ಷಕವಾಗಿದ್ದು ನಯನ ಮನೋಹರವಾಗಿವೆ. ಈ ನೀಲಮೇಘ ಶ್ಯಾಮನು ಒಂದು ಗರುಡಪೀಠದ ಮೇಲೆ ಅಂಬೆಗಾಲಿಡುತ್ತಿದ್ದಾನೆ. ಪದಕಗಳು, ಸರಗಳು, ಕಂಠೀಹಾರಗಳು ಮತ್ತು ಕಾಲಂದಿಗೆಗಳೇ ಮುಂತಾದ ಅನೇಕ ಆಭರಣಗಳು ಅವನನ್ನು ಅಲಂಕರಿಸಿವೆ. ಅವನು ಹುಲಿಯುಗುರಿನ ಪದಕವನ್ನು ತೂಗಾಡಿಸುತ್ತಾ ತನ್ನ ಶೌರ್ಯವನ್ನು ಪ್ರದರ್ಶಿಸುತ್ತಿದ್ದಾನೆ. ಅಸಂಖ್ಯಾತ ಭಕ್ತರು ಅವನ ಅಸೀಮ ಸೌಂದರ್ಯದ ಮೇಲೆ ಕಣ್ಣು ಹಾಕಿ ಅವನಿಗೆ ಕಣ್ಣು ದೃಷ್ಟಿ ದೋಷ  ಆದೀತೆಂದು ಪುರೋಹಿತರು, ಅದನ್ನು ತಡೆಯಲು, ಈ ಪದಕವನ್ನು ತಪ್ಪದೆ ತೊಡಿಸುತ್ತಾರೆ! ಈ ದಿವ್ಯ ಸೌಂದರ್ಯವನ್ನು ಈಂಟುತ್ತಿರುವ ನಿಮಗೆ ಅವನ ಒಡ್ಯಾಣದ ಕಿರುಗಂಟೆಗಳ ಕಿಣಿ ಕಿಣಿ ನಾದ ಮತ್ತು ಅವನ ಕೋಮಲವಾದ ಪಾದಗಳನ್ನು ಅಲಂಕರಿಸಿರುವ ಜಾಜ್ವಲ್ಯಮಾನವಾದ ಕಾಲಂದಿಗೆಗಳ ಝಣಝಣನಾದ , ಅವನು ನಿಮ್ಮ ಹೃದಯಕ್ಕೆ ಲಗ್ಗೆಯಿಡುತ್ತಿರುವಾಗ, ಕಿವಿದುಂಬಿದಂತೆ ಭಾಸವಾಗದೆಯಿರದು!

ಪುರಂದರದಾಸರು ಈ ಸನ್ನಿಗೆ ಭೇಟಿ ನೀಡಿದಾಗ ಅಂಬೆಗಾಲು ಕೃಷ್ಣನ ಚೆಲುವಿನಿಂದ ಸೂರ್ತಿಗೊಂಡು ಜನಪ್ರಿಯ ಕೀರ್ತನೆಯಾದ “ಜಗದೋದ್ಧಾರನ ಆಡಿಸಿದಳು ಯಶೋದ” ರಚಿಸಿದರು. ಅವನು ತನ್ನ ಬಲಗೈಯಲ್ಲಿ ಹಿಡಿದಿರುವ ಸ್ವಾದಿಷ್ಟವಾದ ನವನೀತವು ಸಾಧಾರಣವಾದ ಬೆಣ್ಣೆಯಲ್ಲ. ಬೆಣ್ಣೆಯ ಮುದ್ದೆಯಂತೆ ರೂಪಿತವಾದ ಆತ್ಮಸಾಕ್ಷಾತ್ಕಾರದ ಜ್ಞಾನ. ಶುದ್ಧ ಮನಸ್ಸಿನಿಂದ ನೀವು ಅವನಲ್ಲಿ ಕೋರಿದರೆ ಪರಂಧಾಮನು ಈ ಅಮೂಲ್ಯವಾದ ತಿನಿಸನ್ನು ನಿಮಗೆ ನೀಡಲು ಸದಾ ಸಿದ್ಧನಾಗಿದ್ದಾನೆ. ಬೇಡಿದವರಿಗೆ ಸಂತಾನಭಿಕ್ಷೆಯನ್ನು ನೀಡುವುದಕ್ಕೂ ಈ ಸ್ವಾಮಿಯು ಪ್ರಸಿದ್ಧನಾಗಿದ್ದಾನೆ. ಸಂತಾನಾಪೇಕ್ಷೆಯ ಹರಕೆ ಹೊತ್ತ ಜನರು ಅರ್ಪಿಸಿದ ರಾಶಿರಾಶಿ ಬೆಳ್ಳಿಯ ಮತ್ತು ಮರದ ತೊಟ್ಟಿಲುಗಳೇ ಈ ಮಾತಿಗೆ ಸಾಕ್ಷಿ.
Leave a Reply

Your email address will not be published. Required fields are marked *