Search
Wednesday 3 June 2020
  • :
  • :

ಪ್ರಾಮಾಣಿಕ ಬಹುಳ

ವೃಂದಾವನದ ಸಮೀಪ ಕಾಡಿನಲ್ಲಿ ಹಸುಗಳು ನಿರ್ಭೀತಿಯಿಂದ ಹುಲ್ಲು ಮೇಯುತ್ತಿದ್ದವು. ಅವುಗಳ ಸಂತೋಷಕ್ಕೆ ಪೆಟ್ಟು  ಬಿತ್ತು ಹಸಿದ ಹುಲಿಯಿಂದ. ಗೋಮಾಂಸಕ್ಕಾಗಿ ಹಾತೊರೆಯುತ್ತಿದ್ದ ವ್ಯಾಘ್ರವು ಹಸುಗಳನ್ನು ಅಟ್ಟಿಸಿಕೊಂಡು ಹೋಯಿತು. ಗೋವುಗಳೆಲ್ಲ ಪಾರಾದರೂ ಬಹುಳ ಎಂಬ ಹಸು ಸಿಕ್ಕಿಹಾಕಿಕೊಂಡಿತು. ಕೆಲ ದಿನಗಳ ಹಿಂದೆಯಷ್ಟೇ ಕರುವಿಗೆ ಜನ್ಮ ನೀಡಿದ್ದ ಬಹುಳಾಗೆ ವೇಗವಾಗಿ ಓಡಲಾಗುತ್ತಿರಲಿಲ್ಲ. ಹೀಗಾಗಿ ಹುಲಿಗೆ ಆಹಾರವಾಗಿ ನಿಲ್ಲಬೇಕಾಯಿತು. ಕೊಟ್ಟಿಗೆಯಲ್ಲಿದ್ದ ಕರುವಿನ ನೆನಪಾಯಿತು. ಹುಲಿಯ ಬಳಿ ಬೇಡಿ ಕೊಂಡಿತು : ‘ಕೊನೆಯ ಬಾರಿ ನನ್ನ ಕರುವಿಗೆ ಹಾಲುಣಿಸಲು ಅವಕಾಶ ಕೊಡು. ಕೆಲ ದಿನಗಳ ಹಿಂದೆಯಷ್ಟೇ ಹುಟ್ಟಿದ ಅವಳಿಗೆ ನನ್ನ ವಿಶೇಷ ಹಾಲು ಅಗತ್ಯ. ನಾನು ಖಂಡಿತ ನಾಳೆ ಬೆಳಿಗ್ಗೆ ಬರುವೆ. ಆಗ ನೀನು ನನ್ನನ್ನು ಕೊಂದು ತಿನ್ನಬಹುದು.’

ಜೋರಾಗಿ ನಕ್ಕ ಹುಲಿ ‘ನಿನ್ನನ್ನು ನಂಬಬೇಕೆ? ನನಗೆ ಆಹಾರವಾಗದಿರಲು ಇದೊಂದು ತಂತ್ರ.’ ಆದರೆ ಬಹುಳ ಹುಲಿಗೆ ಮನವರಿಕೆ ಮಾಡಲು ಪ್ರಯತ್ನಿಸಿತು : ‘ನಾನು ಕೃಷ್ಣನಿರುವ ವೃಂದಾವನದಿಂದ ಬಂದಿರುವುದು.  ನಾವು ವ್ರಜವಾಸಿಗಳು ಪ್ರಾಮಾಣಿಕರು. ಕೊಟ್ಟ ಮಾತನ್ನು ಎಂದಿಗೂ ತಪ್ಪುವುದಿಲ್ಲ. ನನ್ನನ್ನು ನಂಬು!’ ಸ್ವಲ್ಪ ಹೊತ್ತು ಯೋಚಿಸಿ ವ್ಯಾಘ್ರವು ಒಪ್ಪಿಕೊಂಡಿತು ‘ನಾಳೆ ಬೆಳಿಗ್ಗೆ ಬರದಿದ್ದರೆ ನಿನ್ನನ್ನು ಮಾತ್ರ ಅಲ್ಲ, ಇಡೀ ಗೋ ಸಮೂಹವನ್ನೇ ಸ್ವಾಹ ಮಾಡುವೆ’ ಎಂದು ಎಚ್ಚರಿಸಿತು.

ಬಹುಳ ಸರಸರನೆ ತನ್ನ ಕೊಟ್ಟಿಗೆಗೆ ಬಂತು. ಅದರ ಆಗಮನಕ್ಕಾಗಿ ಪರಿತಪಿಸುತ್ತಿದ್ದ ಅದರ ಯಜಮಾನ ಅದನ್ನು ಕಂಡು ಸಮಾಧಾನಗೊಂಡ. ಹೆಚ್ಚು ಹುಲ್ಲು ಹಾಕಿದ. ಅದರ ಕರು ತಾರಾ ತನ್ನಮ್ಮನನ್ನು ಕಂಡು ಕುಣಿದಾಡಿತು. ತಾರಾ ನೇರವಾಗಿ ಕೆಚ್ಚಲಿಗೆ ಬಾಯಿ ಹಾಕಿ ಸಂತೃಪ್ತಗೊಂಡು ನಿದ್ರೆಗೆ ಜಾರಿತು.

ಬಹುಳ ಚಿಂತಾಮಗ್ನವಾಗಿತ್ತು. ದುಃಖಿತ ಬಹುಳಳನ್ನು ಕಂಡು ಗೆಳತಿ ಸುರಭಿ ಕೇಳಿತು : ‘ನಾವೆಲ್ಲ ಓಡಿ ಬಂದ ಮೇಲೆ ಕಾಡಿನಲ್ಲೇನಾಯಿತು?  ನಿನ್ನನ್ನು ಏನು ಬಾಸುತ್ತಿದೆ?’ ಗದ್ಗತಿತ ದ್ವನಿಯಲ್ಲಿ ಬಹುಳ ತಾನು ಹುಲಿಗೆ ನೀಡಿದ ಮಾತನ್ನು ತಿಳಿಸಿತು. ದಿಗ್ರ್ಭಮೆಗೊಂಡ ಸುರಭಿ, ‘ನೀನ್ಯಾಕೆ ಹೋಗಬೇಕು? ತಾರಾಗೆ ನಿನ್ನ ಅಗತ್ಯವಿದೆ. ಹುಲಿಗೆ ಬೇರೆ ಆಹಾರ ಸಿಗುತ್ತದೆ.’ ಆದರೆ ಬಹುಳ ಬದ್ಧವಾಗಿತ್ತು.  ‘ನಾವು ವೃಂದಾವನದ ಹಸುಗಳು. ನಾವು ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎಂದು ಕೃಷ್ಣನಿಗೆ ಗೊತ್ತು. ನಾನು ಹೋಗಲೇ ಬೇಕು.’

ನಂತರ ಕೊಟ್ಟಿಗೆಯಲ್ಲಿದ್ದ ಹಸುಗಳಲ್ಲಿ ಮನವಿ ಮಾಡಿಕೊಂಡಿತು: ‘ಸೋದರಿಯರೇ, ನಾನು ಹೋದ ಮೇಲೆ ತಾರಾ ಒಂಟಿಯಾಗಿ ಬಿಡುತ್ತಾಳೆ. ನೀವು ಅವಳನ್ನು ನೋಡಿಕೊಳ್ಳಬೇಕು.’ ಬಹುಳ ಕಣ್ಣೀರಿಡುತ್ತ ತನ್ನ ಮಗುವನ್ನು ಕೊನೆ ಬಾರಿ ನೇವರಿಸಿತು. ತಲೆ ತಗ್ಗಿಸಿ ಹೊರನಡೆಯಿತು. ಕೊಟ್ಟಿಗೆ ಬಾಗಿಲ ಬಳಿ ನಿಂತು ತಾರಾಳನ್ನು  ಮತ್ತೊಮ್ಮೆ ನೋಡಿ ಕಾಡಿನತ್ತ ಸಾಗಿತು.

ಗವಿಯಲ್ಲಿ ಹುಲಿ ಅಶಾಂತಿಯಿಂದ ನಿಂತಿತ್ತು. ಬಹುಳಳನ್ನು ಕಂಡು ಅದರ ಹಸಿವು ಇಮ್ಮಡಿಸಿತು. ಎಲ್ಲಿಂದ ಸೇವನೆ ಆರಂಭಿಸಲಿ ಎಂದು ಗೊಂದಲಕ್ಕೀಡಾಯಿತು.  ಆಗ ಅಲ್ಲಿಗೆ ಓಡುತ್ತಾ ಬಂತು ತಾರಾ.  ತಾಯಿ ಮತ್ತು ಹುಲಿ ಮಧ್ಯೆ ನಿಂತು ‘ನಾನು ಕರು. ಹೆಚ್ಚು ಪ್ರಯೋಜನ- ವಿಲ್ಲದವಳು. ಗ್ರಾಮದ ಜನರಿಗೆ ಅಮ್ಮನ ಸೇವೆ ಬೇಕಾಗಿದೆ. ಅವಳನ್ನು ಕಳುಹಿಸಿ ನನ್ನನ್ನು ಆಹಾರ ಮಾಡಿಕೊ’ ಎಂದಿತು. ಹುಲಿಗೆ ಅಚ್ಚರಿ. ಅದೇ ವೇಳೆಗೆ ಬಹುಳಳ ಮಾಲೀಕ ಅಲ್ಲಿಗೆ ಬಂದ. ಪರಿಸ್ಥಿತಿಯನ್ನು ಅವಲೋಕಿಸಿ ಹುಲಿಗೆ ಹೇಳಿದ: ‘ಬಹುಳ ಒಳ್ಳೆಯ ಹಸು. ತನ್ನಹಾಲಿನಿಂದ ನಮಗೆ ಸೇವೆ ಸಲ್ಲಿಸುತ್ತಿದ್ದಾಳೆ. ತಾರಾ ಕೂಡ ಹಾಗೇ ಬೆಳೆಯುತ್ತಾಳೆ. ನಾನು ವೃದ್ಧ. ನನ್ನನ್ನು ಆಹಾರ ಮಾಡಿಕೋ’ ಹುಲಿಗೆ ತಮಾಷೆ ಎನಿಸಿತು. ಹಸು ಬರುವುದಿಲ್ಲವೆಂದೇ ಭಾವಿಸಿತ್ತು. ಈಗ ಮೂರು ಆಯ್ಕೆಗಳು! ಅಥವಾ ಮೂರು ಆಹಾರ!

ಆಗ ಗವಿಯೊಳಗೆ ಪ್ರತ್ಯಕ್ಷನಾದ ಶ್ರೀಕೃಷ್ಣ! ಧೈರ್ಯದಿಂದ ಹುಲಿಯತ್ತ ತೆರಳಿ ಕೋಪದಿಂದ ನುಡಿದ : ‘ನಿನಗೆ ನಾಚಿಕೆಯಾಗದೇ? ಅದರ ಪ್ರಾಮಾಣಿಕತೆಗಾಗಿ ಬಹುಳಳನ್ನು ನೀನು ಬಿಡಬೇಕು. ಅವಳು ಕೊಟ್ಟ ಮಾತು ಉಳಿಸಿ ಕೊಳ್ಳಲು ಬಂದಿದ್ದಾಳೆ. ಅವಳ ಕರು ಕೂಡ. ಅದೇ ರೀತಿ ವೃದ್ಧ.’ ನಂತರ ಕೃಷ್ಣ ಹುಲಿಯ  ನೆತ್ತಿ ಸವರಿ ಆಶೀರ್ವದಿಸಿದ. ಹುಲಿ ನಾಚಿಗೆಯಿಂದ ತಲೆ ತಗ್ಗಿಸಿತು. ಅಲ್ಲಿಂದ ಓಡಿಹೋಯಿತು, ಮತ್ತೆ ಬಾರದಂತೆ.

ಪ್ರಾಮಾಣಿಕತೆಯಿಂದ ಬಹುಳ ತನ್ನ ಪ್ರಾಣವನ್ನಷ್ಟೇ ಅಲ್ಲ, ತನ್ನ ಕರು ಹಾಗೂ ಮಾಲೀಕನ ಜೀವವನ್ನೂ ಉಳಿಸಿತು.
Leave a Reply

Your email address will not be published. Required fields are marked *