nitya annadana at iskcon

ಮಂದಿರಕ್ಕೆ ಭೇಟಿ ನೀಡುವವರಿಗೆ  11.30 ರಿಂದ ಮಧ್ಯಾಹ್ನ 2.00 ಗಂಟೆವರೆಗೆ ಉಚಿತವಾದ, ಸಮೃದ್ಧ, ಸ್ವಾದಿಷ್ಟ ಪ್ರಸಾದವನ್ನು ನೀಡಲಾಗುತ್ತಿದೆ. ಮುಂದಿನ ಬಾರಿ ಮಂದಿರಕ್ಕ ಭೇಟಿ ನೀಡಿದಾಗ ಅನ್ನ, ಸಾಂಬಾರ್, ಪಲ್ಯ, ಸಿಹಿ ಮತ್ತು ಮಜ್ಜಿಗೆ ಇರುವ ರುಚಿ ಶುಚಿಯಾದ ಭೋಜನವನ್ನು ಸ್ವೀಕರಿಸಲು ಮರೆಯದಿರಿ.

ಅನ್ನದಾನದ ಮಹತ್ತ್ವ

ಎಲ್ಲ ದಾನಗಳಲ್ಲಿ ಅನ್ನದಾನವೇ ಸರ್ವ ಶ್ರೇಷ್ಠ. ಅನ್ನದಾನ ಮಾಡಿದವರು ಮೂರು ವಿಧದ ಋಣಭಾರದಿಂದ ಮುಕ್ತರಾಗುವರು ಮತ್ತು ಶ್ರೀ ವಿಷ್ಣುವಿನ ಅಲೌಕಿಕ ಧಾಮಕ್ಕೆ ಹೋಗುತ್ತಾರೆ ಎಂದು ಗರ್ಗ ಸಂಹಿತದಲ್ಲಿ ಹೇಳಲಾಗಿದೆ. ವರಾಹ ಪುರಾಣದಲ್ಲಿ ಶ್ರೀ ವರಾಹನು ಹೇಳುತ್ತಾನೆ, “ಯಾರು ಆಹಾರವನ್ನು (ಅನ್ನದಾನ) ನೀಡುವರೋ ಅವರು ಈ ಲೋಕದಲ್ಲಿ ಕೊಡಲು ಯೋಗ್ಯವಾದ ಎಲ್ಲವನ್ನೂ ಕೊಟ್ಟಂತೆ.”

ಶ್ರೀ ಕೃಷ್ಣನು ಭವಿಷ್ಯ ಪುರಾಣದಲ್ಲಿ ಹೇಳುತ್ತಾನೆ, “ಲೋಕವೆಲ್ಲವೂ ಆಹಾರದಿಂದ ಜೀವಂತವಾಗಿದೆ. ಆಹಾರ ನೀಡುವವನು ಜೀವ ನೀಡಿದಂತೆ ಮತ್ತು ದಿಟವಾಗಿ ಎಲ್ಲವನ್ನೂ ಕೊಟ್ಟಂತೆ. ಆದುದರಿಂದ ಈ ಲೋಕದಲ್ಲಿ ಹಾಗೂ ಅದರ ಆಚೆಗೂ ಚೆನ್ನಾಗಿರಬೇಕೆಂದು ಇಚ್ಛಿಸುವವರು ಆಹಾರ (ಅನ್ನದಾನ) ನೀಡುವ ವಿಶೇಷ ಪ್ರಯತ್ನ ಮಾಡಬೇಕು . . .”

ಲೌಕಿಕವಾಗಿ ಕಲುಷಿತವಾಗಿರುವ ನಮ್ಮ ಪ್ರಜ್ಞೆಯನ್ನು ದೈವ ಪ್ರಜ್ಞೆಯತ್ತ ಕ್ರಮೇಣ ಮೇಲಕ್ಕೆತ್ತುವ ಆಧ್ಯಾತ್ಮಿಕ ಶಕ್ತಿ ಪ್ರಸಾದಕ್ಕಿದೆ. ಆದುದರಿಂದ ಪ್ರಸಾದ ವಿತರಣೆಯು ಭಕ್ತಿಸೇವೆಯ ಅವಿಭಾಜ್ಯ ಭಾಗವಾಗಿದೆ. ಇಸ್ಕಾನ್‌ನ ಎಲ್ಲ ಮಂದಿರಗಳಲ್ಲಿಯೂ ಪ್ರಸಾದವನ್ನು ಹಂಚಬೇಕು ಎಂದು ಇಸ್ಕಾನ್ ಸಂಸ್ಥಾಪನಾಚಾರ್ಯ ಶ್ರೀಲ ಪ್ರಭುಪಾದರು ಕಡ್ಡಾಯ ಮಾಡಿದ್ದರು.

ನೀವು ಹೇಗೆ ಕೊಡುಗೆ ಸಲ್ಲಿಸಬಹುದು?

ಸ್ವಯಂ ಸೇವಕ ಅಥವಾ ದಾನಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ನಾವು ಅನ್ನದಾನ ಪ್ರಸಾದವನ್ನು ನೀಡಲು ಈಗ ಮಂದಿರದ ಅನ್ನಕೂಟ ಹೊಟೆಲ್ ಜಾಗವನ್ನು ಬಳಸುತ್ತಿದ್ದೇವೆ. ಹೆಚ್ಚು ಜನರು ಏಕ ಕಾಲಕ್ಕೆ ಪ್ರಸಾದ ಸ್ವೀಕರಿಸಲು ಅನುಕೂಲವಾಗುವಂತೆ ಹೊಸ ಅನ್ನದಾನ ಮಂಟಪವನ್ನು ಅತಿ ಶೀಘ್ರದಲ್ಲಿ ನಿರ್ಮಿಸಲಾಗುವುದು. ಈ ಕಾರ್ಯಕ್ರಮಕ್ಕೆ ಉದಾರವಾಗಿ ದಾನ ಮಾಡಬೇಕೆಂದು ನಾವು ಕೋರುತ್ತೇವೆ.

ಶ್ರೀಲ ಪ್ರಭುಪಾದರು ಹೇಳುತ್ತಾರೆ :

“ಯಾರಾದರೂ ಬಂದರೆ, ಅವರು ಪ್ರಸಾದ ಸ್ವೀಕರಿಸಲಿ, ಹರೇ ಕೃಷ್ಣ ಮಂತ್ರವನ್ನು ಜಪಿಸಲಿ ಮತ್ತು ಸಂತೋಷವಾಗಿರಲಿ ಎನ್ನುವುದೇ ನಮ್ಮ ತತ್ತ್ವ. ಎಲ್ಲವೂ ಕೃಷ್ಣನಿಂದ ಪೂರೈಕೆಯಾಗುತ್ತದೆ. ಕೃಷ್ಣನು ಬಡವನೇನಲ್ಲ. ನಾವು ಯಾಕೆ ನಿರಾಕರಿಸಬೇಕು? ಯಾವುದು ಏನೇ ಆಗಲಿ, ಇದನ್ನು ಮಾಡಲೇಬೇಕು. ಇದು ಕಷ್ಟವಲ್ಲ. ಒಳ್ಳೆಯ ನಿರ್ವಹಣೆಯಷ್ಟೇ ಮುಖ್ಯ. . . ನಮಗೆ ವಿಶ್ವಾಸವಿದೆ. ಕೃಷ್ಣನು ಪೂರೈಸುತ್ತಾನೆ! ಇಡೀ ಜಗತ್ತೇ ಬರಲಿ, ನಾವು ಅವರಿಗೆ ಅನ್ನದಾನ ಮಾಡಬಲ್ಲೆವು.”

ನಿತ್ಯ ಅನ್ನದಾನಕ್ಕೆ ಕೊಡುಗೆ ನೀಡಲು ಇಲ್ಲಿ ಕ್ಲಿಕ್ ಮಾಡಿ.